ಶಿವಾಜಿ
	1627-80. ಮರಾಠವಂಶದ ಸ್ಥಾಪಕ ಹಾಗೂ ಪ್ರಸಿದ್ಧ ದೊರೆ. ಇವನು 1627 ಏಪ್ರಿಲ್ 20ರಂದು ಪುಣೆಯ ಜುನ್ನಾರದ ಬಳಿಯ ಶಿವನೇರುದುರ್ಗದಲ್ಲಿ ಜನಿಸಿದ(ಇದೇ ದಿನ ಮೊಗಲ ದೊರೆ ಷಾಜಹಾನ್ ಸಿಂಹಾಸನವನ್ನೇರಿದ). ತಂದೆ ಷಹಾಜಿಭೋನ್ಸ್ಲೆ, ತಾಯಿ ಜೀಜಾಬಾಯಿ. ಇವನ ತಂದೆ ಬಿಜಾಪುರದ ಸುಲ್ತಾನರಲ್ಲಿ ಸೇವೆ ಸಲ್ಲಿಸುತ್ತಿದ್ದ. ಆತನಿಗೆ ಕರ್ನಾಟಕದ ಹೊಸ ಜಹಗೀರು ದೊರೆತ ಅನಂತರ ಮಗ ಶಿವಾಜಿಯನ್ನೂ ಹೆಂಡತಿ ಜೀಜಾಬಾಯಿಯನ್ನೂ ದಾದಾಜಿಕೊಂಡದೇವನ ಸಮರ್ಥ ಪೋಷಣೆಯಲ್ಲಿ ಬಿಟ್ಟು ತನ್ನ ಎರಡನೆಯ ಹೆಂಡತಿ ತುಕಾಬಾಯಿ ಮೋಹಿತೆಯೊಡನೆ ಹೊಸ ಜಹಗೀರಿಗೆ ತೆರಳಿದ. ಸದ್ಗು ಣಸಂಪನ್ನಳೂ ಅಸಾಧಾರಣ ಜ್ಞಾನಿಯೂ ಆಗಿದ್ದ ಜೀಜಾ ಬಾಯಿ ರಾಮಾಯಣ, ಮಹಾಭಾರತ ಮುಂತಾದ ಕಾವ್ಯ ಪುರಾಣಗಳ ವೀರಾದಿ üವೀರರ ಕತೆಗಳನ್ನು ತನ್ನ ಮಗನಿಗೆ ಹೇಳುತ್ತ ಅವನಲ್ಲಿ ಧರ್ಮರಕ್ಷಣೆಯ ಮನೋಭಾ ವವನ್ನು ಪ್ರಚೋದಿಸಿದ್ದಳು. ಶಿವಾಜಿಯ ಜೀವನ ರೂಪುಗೊಳ್ಳುವಲ್ಲಿ ತಾಯಿ ಜೀಜಾಬಾಯಿಯ ಪಾತ್ರ ಅತಿ ಮುಖ್ಯವಾದುದು. ಇದರ ಜೊತೆಗೆ ಗುರು ದಾದಾಜಿಕೊಂಡದೇವನ ಸಮರ್ಥ ಮಾರ್ಗದರ್ಶನವೂ ದೊರಕಿತು. ಆಡಳಿತಜ್ಞಾನ ಹಾಗೂ ಯುದ್ಧವಿದ್ಯೆಯನ್ನು ಗುರುವಿನಿಂದ ಕಲಿತ ಶಿವಾಜಿಯ ಮೇಲೆ ಸಂತರಾದ ರಾಮದಾಸ ಮತ್ತು ತುಕಾರಾಮರ ವ್ಯಕ್ತಿತ್ತ್ವವೂ ಪ್ರಭಾವ ಬೀರಿತ್ತು. 

	ಇವನು ಹುಟ್ಟಿ ಬೆಳೆದುದು ಗುಡ್ಡಗಾಡಿನ ಮಾವಳಿ ಜನರೊಡನೆ. ಚಿಕ್ಕಂದಿನಿಂದಲೂ ಮಾವಳಿಗಳ ಸಂಪರ್ಕ ಪಡೆದದ್ದು ಮುಂದೆ ಅಮೂಲ್ಯ ವರವಾಗಿ ಪರಿಣಮಿಸಿತು. ಮಾವಳಿಗಳು ಇವನ ಉತ್ತಮ ಸೈನಿಕರು, ಸಹಭಾಗಿಗಳು ಮತ್ತು ಗೆರಿಲ್ಲಾ ಯುದ್ಧದಲ್ಲಿ ನಿಷ್ಠಾವಂತ ವೀರರೂ ಆಗಿದ್ದರು. 

	ದಖ್ಖನ್ ಸುಲ್ತಾನರ ದೌರ್ಬಲ್ಯ ಹಾಗೂ ಮೊಗಲ ಸಾಮ್ರಾಟ (ಔರಂಗಜೇಬ) ಉತ್ತರ ಭಾರತದ ದಂಗೆಗಳನ್ನು ಅಡಗಿಸುವಲ್ಲಿ ನಿರತನಾದುದು ಮರಾಠರ ಪ್ರಾಬಲ್ಯಕ್ಕೆ ಬಹುಮಟ್ಟಿಗೆ ಅನುಕೂಲಕರ ವಾತಾವರಣ ನಿರ್ಮಿಸಿದುವು. ಬಿಜಾಪುರದ ಸುಲ್ತಾನ ಅನಾರೋಗ್ಯ ನಿಮಿತ್ತ ಹಾಸಿಗೆ ಹಿಡಿದಿದ್ದಾಗ ಶಿವಾಜಿ ತನ್ನ 16ನೆಯ ವಯಸ್ಸಿನಲ್ಲೇ 1646ರಲ್ಲಿ ಬಿಜಾಪುರದ ಅಧೀನದಲ್ಲಿದ್ದ ತೋರಣದುರ್ಗ, ರಾಯಘಡ, ಪ್ರತಾಪಘಡ ಮುಂತಾದವುಗಳನ್ನು ವಶಪಡಿಸಿಕೊಂಡ. 1647ರಲ್ಲಿ ದಾದಾಜಿಕೊಂಡದೇವ ನಿಧನನಾದ. 1649-55ರವರೆಗೆ ಇವನು ತನ್ನ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ಏಕೆಂದರೆ ಬಿಜಾಪುರದ ಸುಲ್ತಾನ ಶಿವಾಜಿಯು ಚಟುವಟಿಕೆಗಳಿಂದ ಕ್ರೋಧಗೊಂಡು ಷಾಹಜಿಭೋನ್ಸ್ಲೆಯನ್ನು ಬಂಧನದಲ್ಲಿಟ್ಟ, ಅನಂತರ ಮಗನ ಸದ್ವರ್ತನೆಯ ಷರತ್ತಿನ ಮೇಲೆ ಬಿಡುಗಡೆಗೊಳಿಸಿದ. ಈ ಸಮಯದಲ್ಲಿ ಇವನು ತನ್ನ ಆಡಳಿತ ಕ್ರಮವನ್ನು ಸುಸಂಘಟಿತಗೊಳಿಸಿಕೊಂಡ. 1656ರಲ್ಲಿ ಜಾವಳಿ ಎಂಬ ಸಣ್ಣ ಮರಾಠಿ ರಾಜ್ಯವನ್ನು ಅದರ ಅರೆಸ್ವತಂತ್ರ ಮರಾಠಿ ಚಂದ್ರರಾವ್ ಮೋರೆಯನ್ನು ನಿಯೋಗಿಯೊಬ್ಬನಿಂದ ಕೊಲ್ಲಿಸುವ ಮುಖಾಂತರ ಪಡೆದುಕೊಂಡ. 1657ರಲ್ಲಿ ಮೊದಲಬಾರಿಗೆ ಮೊಗಲರ ವಿರುದ್ಧ ಹೋರಾಟಕ್ಕಿಳಿದ. ಔರಂಗಜೇಬ ಬಿಜಾಪುರದ ಮುತ್ತಿಗೆಯಲ್ಲಿ ಮಗ್ನನಾಗಿರುವ ಅವಕಾಶ ಬಳಸಿ ಅವನ ಅಧೀನದಲ್ಲಿದ್ದ ಅಹಮದ್‍ನಗರ ಮತ್ತು ಜುನ್ನಾರ್ ಜಿಲ್ಲೆಗಳಿಗೆ ಮುತ್ತಿಗೆ ಹಾಕಿ ಲೂಟಿಮಾಡಿದ.

	ಔರಂಗಜೇಬ ಸೈನ್ಯವೊಂದರ ನೆರವಿನಿಂದ ಇವನನ್ನು ಸೋಲಿಸಿದ ಬಳಿಕ ಔರಂಗಜೇಬನೊಂದಿಗೆ ಒಪ್ಪಂದ ಮಾಡಿಕೊಂಡ. ಆದರೆ ಅವನು ಉತ್ತರಕ್ಕೆ ನಿರ್ಗಮಿಸಿದ ತಕ್ಷಣ ಇವನು ತನ್ನ ಆಕ್ರಮಣಕಾರಿ ನೀತಿ ಮುಂದುವರಿಸಿ, ತನ್ನ ಗಮನವನ್ನು ಉತ್ತರ ಕೊಂಕಣದ ಕಡೆಗೆ ಕೇಂದ್ರೀಕರಿಸಿ ಕಲ್ಯಾಣಿ, ಭಿವಂಡಿ ಮತ್ತು ಮಾಹುಲಿಗಳನ್ನು ವಶಪಡಿಸಿಕೊಂಡು ಮಾಹದ್‍ವರೆಗೆ ತನ್ನ ಅಧಿಕಾರ ವಿಸ್ತರಿಸಿದ.                    
            
	ಬಿಜಾಪುರದ ಸುಲ್ತಾನನೊಂದಿಗೆ ಯುದ್ಧ : ಮೊಗಲ್ ದಾಳಿಯಿಂದ ತಾತ್ಕಾಲಿಕ ವಿಮುಕ್ತಿ ಪಡೆದ ಬಿಜಾಪುರದ ಸುಲ್ತಾನ ಇವನನ್ನು ಸದೆಬಡಿಯಲು ದೃಢ ಪ್ರಯತ್ನ ಮಾಡಿದ. ಇವನನ್ನು ಜೀವಂತವಾಗಿ ಅಥವಾ ಕೊಂದು ತರಲೆಂದು ತನ್ನ ಮಹಾದಂಡನಾಯಕನಾದ ಅಫ್ಜಲ್‍ಖಾನನ ನಾಯಕತ್ವದಲ್ಲಿ ದೊಡ್ಡ ಸೈನ್ಯವೊಂದನ್ನು ಕಳುಹಿಸಿ 1659ರಲ್ಲಿ ಇವನ ರಾಜ್ಯದ ಮೇಲೆ ದಾಳಿ ನಡೆಸಿ ಪ್ರತಾಪಘಡದ ಕೋಟೆಯಲ್ಲಿ ರಕ್ಷಣೆ ಪಡೆದ. ಆದರೆ ಶಿವಾಜಿ ತನ್ನ ಕೋಟೆಯಿಂದ ಹೊರಬರಲಿಲ್ಲವಾಗಿ ಮರಾಠ ಬ್ರಾಹ್ಮಣ ಕೃಷ್ಣಾಜಿಭಾಸ್ಕರನ ಮುಖಾಂತರ ಸಂಧಾನ ನಡೆಸಿದ. ಕೃಷ್ಣಾಜಿಭಾಸ್ಕರ ಇವನಿಗೆ ಅಫ್ಜಲ್‍ಖಾನನ ನಿಜವಾದ ಉದ್ದೇಶ ಕೊಲೆ ಅಥವಾ ಬಂಧನವೆಂಬುದನ್ನು ಸೂಕ್ಷ್ಮವಾಗಿ ವಿವರಿಸಿ ಶಿವಾಜಿಯನ್ನು ಎಚ್ಚರಿಸಿದ. ಇದರಿಂದ ಎಚ್ಚೆತ್ತ ಶಿವಾಜಿ ರಕ್ಷಣೆ ಹಾಗೂ ದಾಳಿಗೆ ಸಿದ್ಧತೆಮಾಡಿಕೊಂಡು ಅಫ್ಜಲ್‍ಖಾನನನ್ನು ಭೇಟಿಯಾದ. ಉಪಾಯದಿಂದ ತಾನು ಬಚ್ಚಿಟ್ಟುಕೊಂಡಿದ್ದ ವ್ಯಾಘ್ರನಖ ಆಯುಧದಿಂದ ಅವನನ್ನು ಕೊಂದು ಬೆಟ್ಟ ಪ್ರದೇಶದಲ್ಲಿ ತಲೆಮರೆಸಿಕೊಂಡ. ಅನಂತರ ತನ್ನ ಸೈನ್ಯದ ಸಹಾಯದಿಂದ ಬಿಜಾಪುರದ ಸೈನ್ಯವನ್ನು ಸೋಲಿಸಿ ಅವರ ಠಾಣಗಳನ್ನು ಲೂಟಿಮಾಡಿದ. ಬಿಜಾಪುರ ಸುಲ್ತಾನನೊಂದಿಗೆ ಒಪ್ಪಂದ ಮಾಡಿಕೊಂಡು ಸ್ವತಂತ್ರ ರಾಜನಾದ.        

	ಮೊಗಲರೊಂದಿಗೆ ಯುದ್ಧ: 1660ರಲ್ಲಿ ಔರಂಗಜೇಬ ಷೈಸ್ತಾಖಾನ ನನ್ನು ದಖನ್ನಿನ ರಾಜ್ಯಪಾಲನನ್ನಾಗಿ ನೇಮಿಸಿ, ಶಿವಾಜಿಯ ಚಟುವಟಿಕೆಗ ಳನ್ನು ಹತ್ತಿಕ್ಕುವಂತೆ ಆಜ್ಞಾಪಿಸಿದ. ಅದರಂತೆ ಷೈಸ್ತಾಖಾನ ಪುಣೆಯನ್ನು ವಶಪಡಿಸಿಕೊಂಡು, ಚಾಕನ್‍ಕೋಟೆ ಹಿಡಿದು ಮರಾಠರನ್ನು ಕಲ್ಯಾಣಿ ಜಿಲ್ಲೆಯಿಂದ ಹೊರಗಟ್ಟಿದ. ಇದರಿಂದ ಎರಡು ವರ್ಷಗಳ ಕಾಲ ನಡೆಸಿದ ಹೋರಾಟ ನಿಷ್ಪ್ರಯೋಜಕವಾಯಿತು. ಶಿವಾಜಿ ವೇಷ ಮರೆಸಿಕೊಂಡು ಕೇವಲ ಕೆಲವೇ ಮಂದಿ ಸೈನಿಕರೊಂದಿಗೆ ಪುಣೆಯನ್ನು ತಲುಪಿ ಷೈಸ್ತಾಖಾನನ ಅರಮನೆ ಹೊಕ್ಕ. 1663 ಏಪ್ರಿಲ್ 15ರ ನಡುರಾತ್ರಿ ದಾಳಿ ನಡೆಸಿದ. ಈ ದಾಳಿಯಲ್ಲಿ ಷೈಸ್ತಾಖಾನನ ಮಗ ಅಬ್ದುಲ್‍ಫತೇವ್ ಹತನಾದನಲ್ಲದೆ, ಒಬ್ಬ ಕ್ಯಾಪ್ಟನ್, 40 ಜನ ಸೇವಕರು, 5 ಜನ ಅಂತಃಪುರದ ಸ್ತ್ರೀಯರು ನಿಧನರಾದರು. ಇದರಿಂದ ಶಿವಾಜಿಯ ಗೌರವ ಪ್ರತಿಷ್ಠೆ, ಖ್ಯಾತಿ ಮುಗಿಲಿಗೇರಿತು. 1664ರ ಜನವರಿಯಲ್ಲಿ ಮೊಗಲರ ಸಂಪದ್ಭರಿತ ರೇವು ಪಟ್ಟಣವಾದ ಸೂರತ್‍ಗೆ ಮುತ್ತಿಗೆ ಹಾಕಿ ಅಪಾರ ಐಶ್ವರ್ಯ ಪಡೆದ.

	ಜಯಸಿಂಹ ಮತ್ತು ಪುರಂದರಘಡ ಒಪ್ಪಂದ: ದಖ್ಖನ್ನಿನಲ್ಲಿ ಬೆಳೆಯುತ್ತಿದ್ದ ಶಿವಾಜಿಯ ಪ್ರತಿಷ್ಠೆಯನ್ನು ಸಹಿಸದ ಔರಂಗಜೇಬ ಇವನನ್ನು ಹತ್ತಿಕ್ಕಲು 1665ರಲ್ಲಿ ದಿಲೀಪ್‍ಖಾನ್ ಮತ್ತು ಅಂಬರದ ದೊರೆ ರಾಜ ಜೈಸಿಂಗರನ್ನು ಕಳುಹಿಸಿದ. ವಿವೇಕಶಾಲಿ ಹಾಗೂ ಚತುರ ಸೇನಾಧಿಪತಿಯಾದ ಜೈಸಿಂಗ್ ಬಿಜಾಪುರದ ಸುಲ್ತಾನನೊಡನೆ ಒಪ್ಪಂದ ಮಾಡಿಕೊಂಡು ಪುರಂದರಘಡಕೋಟೆ ವಶಪಡಿಸಿಕೊಂಡ. ಶಿವಾಜಿ ತನ್ನ ರಕ್ಷಣೆಗಾಗಿ ಮಾಡಿದ ಪ್ರಯತ್ನವೆಲ್ಲ ವಿಫಲವಾಗಿ 1665 ಜೂನ್ 25ರಂದು ಪುರಂದರಘಡ ಒಪ್ಪಂದ ಮಾಡಿಕೊಂಡ. ಅದರಂತೆ ಮೊಗಲರಿಗೆ 23 ಕೋಟೆಗಳನ್ನು ಬಿಟ್ಟುಕೊಟ್ಟ. 12 ಕೋಟೆಗಳನ್ನು ಮಾತ್ರ ತನ್ನ ಅಧೀನದಲ್ಲಿಟ್ಟುಕೊಂಡ. 5000 ಅಶ್ವಗಳೊಂದಿಗೆ ತನ್ನ ಕೆಲವು ಪ್ರಾಂತಗಳನ್ನು ಕಳೆದುಕೊಂಡಿದ್ದರಿಂದ ಆದ ನಷ್ಟ ಸರಿದೂಗಿಸಿಕೊಳ್ಳಲು ಚೌತ್ ಮತ್ತು ಸರ್ದೇಶ್‍ಮುಖಿ ತೆರಿಗೆ ವಸೂಲಿಮಾಡಲು ಅನುಮತಿ ಪಡೆದುಕೊಂಡ. 

	ಅನಂತರ ಜೈಸಿಂಗ್ ಉಪಾಯದಿಂದ ಶಿವಾಜಿಯನ್ನು ನಂಬಿಸಿ ಆಗ್ರಾಕ್ಕೆ ಬರುವಂತೆ ಮನ ಒಲಿಸಿದ. 1666 ಮಾರ್ಚ್ 16ರಂದು ತನ್ನ ಹಿರಿಯಮಗ ಸಂಭಾಜಿಯೊಂದಿಗೆ ಶಿವಾಜಿ ಆಗ್ರಾಕ್ಕೆ ತೆರಳಿದ. ಆದರೆ ಆಗ್ರಾದಲ್ಲಿ ಔರಂಗಜೇಬನಿಂದ ಅವಮಾನಕ್ಕೀಡಾದ್ದರಿಂದ ಕ್ರೋಧಗೊಂಡ. ಚಕ್ರವರ್ತಿಯ ನಂಬಿಕೆದ್ರೋಹವನ್ನು ಖಂಡಿಸಲಾಗಿ ಸೆರೆಮನೆಯಲ್ಲಿ ಬಂದಿಯಾದ. ಸ್ವಲ್ಪದಿನಗಳ ಅನಂತರ ಅಲ್ಲಿಂದ ತಪ್ಪಿಸಿಕೊಂಡು 1666 ನವೆಂಬರ್ 30ರಂದು ರಾಯಘಡ ತಲುಪಿದ. ಮತ್ತೆ ಮೊಗಲರ ಮೇಲೆ ದಾಳಿಮಾಡಿ ಅಪಾರ ಸಂಪತ್ತನ್ನು ಪಡೆದ. ಔರಂಗಜೇಬ ವಾಯವ್ಯ ಪ್ರಾಂತದಲ್ಲಿ ಆಫ್ಘನ್ ಸಮುದಾಯದ ದಂಗೆಗಳನ್ನು ಅಡಗಿಸಲು ಮಗ್ನನಾಗಿದ್ದಾಗ ಶಿವಾಜಿ ದಾಳಿ ನಡೆಸಿ ಜಯಪಡೆದ(1670-74). ಪಟ್ಟಾಭಿಷಿಕ್ತನಾದ ಮೇಲೆ ಛತ್ರಪತಿ ಎಂಬ ಬಿರುದು ಧರಿಸಿದ. 1677ರಲ್ಲಿ ಗೋಲ್ಕೊಂಡದ ಸುಲ್ತಾನನ ಸ್ನೇಹಗಳಿಸಿ, ದಕ್ಷಿಣ ಭಾರತದ ಸುಲ್ತಾನನ ಅಧೀನದಲ್ಲಿದ್ದ ಜಿಂಜೀ, ವೆಲ್ಲೂರು, ತಂಜಾವೂರು ಮತ್ತು ಕರ್ನಾಟಕದ ಕೆಲವು ಜಿಲ್ಲೆಗಳನ್ನೊಳಗೊಂಡಂತೆ 30 ಲಕ್ಷ ಹೊನ್ನುಗಳ ಆದಾಯ ಬರುವ ಹಾಗೂ 100 ಕೋಟಿಗಳನ್ನೊಳಗೊಂಡಂತೆ ಮೈಸೂರಿನ ಪ್ರಸ್ಥಭೂಮಿಯ ವಿಶಾಲ ಭೂಪ್ರದೇಶಗಳನ್ನು ಗೆದ್ದುಕೊಂಡ. ದಕ್ಷಿಣ ಭಾರತದ ಆಕ್ರಮಣಗಳು ಇವನನ್ನು ನಿಜವಾದ ಸಾಮ್ರಾಟನನ್ನಾಗಿ ಮಾಡಿದುವಲ್ಲದೆ, ಮುಸ್ಲಿಮ್ ಪ್ರಭುತ್ವವನ್ನು ನಿಗ್ರಹಿಸಿದವು. 

	ಶಿವಾಜಿ ನಿಧನ ಹೊಂದಿದಾಗ ಅವನ ರಾಜ್ಯ ಉತ್ತರದಲ್ಲಿ ಸೂರತ್ ಜಿಲ್ಲೆಯ ರಾಮನಗರದಿಂದ ದಕ್ಷಿಣದಲ್ಲಿ ಕಾರವಾರ ಅಥವಾ ಗಂಗಾವತಿ ನದಿಯವರೆಗೆ ಹಬ್ಬಿತ್ತು(ಪೋರ್ಚುಗೀಸ್ ವಸಾಹತುಗಳ ಹೊರತು). ಪೂರ್ವದ ಮೇರೆ ಉತ್ತರದಲ್ಲಿ ಬಗ್ಲಾನದಿಂದ ಹಿಡಿದು ದಕ್ಷಿಣಕ್ಕೆ ಅಂಕುಡೊಂಕಾಗಿ ನಾಸಿಕ್ ಮತ್ತು ಪುಣೆಯ ಜಿಲ್ಲೆಗಳ ಮುಖಾಂತರ ಮುಂದುವರಿದು ಸತಾರ, ಕೊಲ್ಲಾಪುರ ಜಿಲ್ಲೆಗಳ ಬಹು ಭಾಗಗಳನ್ನು ಸುತ್ತುವರಿದಿತ್ತು. ಕೊನೆಯ ಆಕ್ರಮಣದಲ್ಲಿ ಪಶ್ಚಿಮ ಕರ್ನಾಟಕದ ಬೆಳಗಾಂವಿಯಿಂದ ತುಂಗಭದ್ರಾ ನದಿಯವರೆಗಿನ ಪ್ರದೇಶ ಹಾಗೂ ಹಳೆಯ ಮೈಸೂರಿನ ಅನೇಕ ಭಾಗಗಳು, ಚಿತ್ತೂರು ಹಾಗೂ ಆರ್ಕಾಟ್ ಜಿಲ್ಲೆಗಳು ಸಹ ಇವನ ವಶವಾದವು.  ಇವನ ರಾಜ್ಯದಲ್ಲಿ 140 ಕೋಟೆಗಳಿದ್ದು, 7 ಕೋಟಿ ರೂ. ಆದಾಯ ಬರುತ್ತಿತ್ತು.

	ಆದರೆ ಈತ ಸಾಮ್ರಾಟ ಪದವಿಯನ್ನು ಅನುಭವಿಸಲು ಬಹುಕಾಲ ಜೀವಿಸಲಿಲ್ಲ. 1678ರಲ್ಲಿ ಇವನ ಪುತ್ರ ಸಂಭಾಜಿ ಹಾಗೂ ಸೊಸೆ ಯಶುಬಾಯಿ ದಖ್ಖನ್ನಿನ ಮೊಗಲ್ ಗವರ್ನರ್ ದಿಲೀರ್‍ಖಾನನೊಡನೆ ಸೇರಿಕೊಂಡರಲ್ಲದೆ, ಈ ಮಧ್ಯೆ ಮೊಗಲರ ಕಿರುಕುಳ ಹೆಚ್ಚಾಯಿತು. ಈ ಎಲ್ಲ ಘಟನೆಗಳಿಂದ ಇವನ ಆರೋಗ್ಯ ಹದಗೆಡಲು ಕಾರಣವಾಗಿ 1680 ಏಪ್ರಿಲ್ 4ರಂದು ನಿಧನನಾದ.

	ಇವನು ಅಪ್ರತಿಮ ವೀರಯೋಧ ಮತ್ತು ಯಶಸ್ವಿ ಸೇನಾನಿ ಮಾತ್ರವಲ್ಲದೆ ಜನತೆಗೆ ಜ್ಞಾನ ಬೋಧನೆಯನ್ನು ನೀಡುವ ದೊರೆಯೂ ಆಗಿದ್ದ. ರಾಲಿನ್‍ಸನ್ ಹೇಳಿರುವಂತೆ “ಶಿವಾಜಿ ನೆಪೋಲಿಯನ್ನನಂತೆ ಒಬ್ಬ ಪ್ರಸಿದ್ಧ ಆಡಳಿತ ದುರಂಧರನಾಗಿದ್ದನಲ್ಲದೆ ಸಮರ್ಥ ಸೇನಾನಾಯಕನೂ ಯಶಸ್ವಿ ಆಡಳಿತಗಾರನೂ ರಾಜತಾಂತ್ರಿಕ ನಿಪೂಣನೂ ಆಗಿ ಕೀರ್ತಿ ಪಡೆಯಲು ಅತ್ಯಗತ್ಯವಾದ ಸದ್ಗುಣಗಳನ್ನು ಹೊಂದಿದವನಾಗಿದ್ದ.” ಇವನ್ನು ತನ್ನ ಆಡಳಿತದಲ್ಲಿ `ಅಷ್ಟ ಪ್ರಧಾನ್ ಎಂಬ ಎಂಟು ಜನರ ಮಂತ್ರಿಗಳ ಸಭೆಯ ಮೂಲಕ ದಕ್ಷ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದ.					
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ